ಭಾರತೀಯ ವೈಶಿಷ್ಟ್ಯ ಕಲ್ಪನೆ

ಕನ್ನಡ

(“ಭಾರತೀಯ ಕಲ್ಪನೆ” – ಅಂತಾರಾಷ್ಟ್ರೀಯ ಸಮ್ಮೇಳನ)

ಈ ಭಾಷಣದಲ್ಲಿ, ನಾನು “ಭಾರತೀಯ ವೈಶಿಷ್ಟ್ಯ” ಎಂಬ ಕಲ್ಪನೆಯ ಬಗ್ಗೆ, ಅದರ ತಾತ್ಪರ್ಯ ಮತ್ತು ವಿವಿಧ ಕಾರ್ಯಕ್ಷೇತ್ರಗಳಲ್ಲಿ ಈ ಕಲ್ಪನೆಯು ಹೇಗೆ ಹರಡಿದೆ ಎಂಬುದರ ಬಗ್ಗೆ ಚರ್ಚಿಸಲಿದ್ದೇನೆ. ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿನ ನನ್ನ  ಜೀವನದ ಅನುಭವಗಳು “ಅಮೇರಿಕಾ ವೈಶಿಷ್ಟ್ಯ” ಎಂಬ ಕಲ್ಪನೆಯನ್ನು ಅರ್ಥ ಮಾಡಿಸಿದವು. ಇದು ಇನ್ನುಳಿದ ದೇಶಗಳ ಜನರಲ್ಲಿ ಇರಬಹುದಾದ ಸಮಾನರೀತಿಯ ಭಾವನೆಗಳನ್ನು ಹುಡುಕಲು ಪ್ರೇರೇಪಿಸಿತು. ಆನಂತರ “ಭಾರತೀಯ ವೈಶಿಷ್ಟ್ಯ” ಎಂಬುದರ ವಿವರಣೆಯ ತಾರ್ಕಿಕ ಹುಡುಕಾಟ ಆರಂಭವಾಯಿತು.

ಅಮೇರಿಕೀಯ ವೈಶಿಷ್ಟ್ಯಭಾವನೆ :

ತಮ್ಮ ಶ್ರೇಷ್ಠತೆ ಮತ್ತು ವಿಭಿನ್ನತೆಯ ಬಗ್ಗೆ ಅಮೆರಿಕನ್ನರಲ್ಲಿರುವ ಸಾಮೂಹಿಕ ಭಾವನೆಯ ಒಂದು ವಿಶಿಷ್ಟ ಸ್ಥಿತಿಯನ್ನು “ಅಮೇರಿಕೀಯ ವೈಶಿಷ್ಟ್ಯ ಭಾವನೆ” ಎನ್ನಬಹುದು. ಈ ಶ್ರೇಷ್ಠತಾಭಾವನೆ ಕ್ರೀಡೆಯಿಂದ ಹಿಡಿದು ವಿಜ್ಞಾನದವರೆಗೆ ಎಲ್ಲಾ ರಂಗಗಳಲ್ಲಿಯೂ ಹರಡಿದೆ. ಬಾಲ್ಯದಿಂದಲೇ ಈ ಭಾವನೆಯು ಜನರಲ್ಲಿ ಪೋಷಿಸಲ್ಪಡುತ್ತದೆ. ಇದರರ್ಥ ಕೆಲವು ಜನರನ್ನು ಅಲ್ಲಲ್ಲಿ ಸೇರಿಸಿ ಶ್ರೇಷ್ಠರನ್ನಾಗಿಸಲಾಗುತ್ತದೆ ಎಂದಲ್ಲ, ಆ “ವ್ಯವಸ್ಥೆಯು” ಶ್ರೇಷ್ಠ ಜನರನ್ನು ಹೇಗೆ ರೂಪಿಸುತ್ತದೆ ಎಂಬ ಭಾವನೆಯ ಬಗ್ಗೆ ಹೇಳುತ್ತಿದ್ದೇನೆ. ಭಾರತದಲ್ಲಿ ಕೆಲವು ಅತಿಶ್ರೇಷ್ಠ ವ್ಯಕ್ತಿಗಳ ಸ್ತುತಿಯನ್ನು ನಾವು ಕಾಣುತ್ತೇವೆ.  ಆದರೆ ಅಮೇರಿಕೀಯ ಭಾವನೆಯು ತನ್ನ ವೈಶಿಷ್ಟ್ಯ ಅಮೇರಿಕದ “ವ್ಯವಸ್ಥೆ”ಯಲ್ಲಿದೆ ಎಂದು ಸಾಧಿಸುತ್ತದೆ, ಈ ಸಂದರ್ಭದಲ್ಲಿ “ವ್ಯವಸ್ಥೆ” ಮತ್ತು ಸಂಸ್ಕೃತಿಗಳನ್ನು ಸಮಾನಾರ್ಥಕಗಳನ್ನಾಗಿ ತೆಗೆದುಕೊಂಡಿದ್ದೇವೆ. ಹಾಗಾಗಿ ಅಮೇರಿಕದ ಸಂಸ್ಕೃತಿಯೇ ಸರ್ವಶ್ರೇಷ್ಠ ಎಂಬ ಭಾವನೆ ಅಮೇರಿಕದ “ವೈಶಿಷ್ಟ್ಯ ಭಾವನೆ” ಎಂದಾಗುತ್ತದೆ.

ಸಂಯುಕ್ತ ಸಂಸ್ಥಾನದಲ್ಲಿಯ ಎಡ ಮತ್ತು ಬಲ ರಾಜಕೀಯ ದೃಷ್ಟಿಕೋನಗಳ – ಎರಡೂ ಬಗೆಯ ಜನರೂ ಅಮೇರಿಕೀಯ ವೈಶಿಷ್ಟ್ಯ ಭಾವನೆಯನ್ನು ಒಪ್ಪುತ್ತಾರೆ. ಆದರೆ ಆ ನಂಬಿಕೆಯ ಕಾರಣಗಳು ಕೊಂಚ ಬೇರೆ ಬೇರೆ.  ಕ್ರೈಸ್ತ ಬಲಪಂಥೀಯನು ಈ ವಿಶಿಷ್ಟತೆಯ ಕಾರಣ ಬೈಬಲ್ಲಿನಲ್ಲಿದೆ ಎಂದು ನಂಬುತ್ತಾನೆ. ಅದರಲ್ಲಿ ಬರೆದಿರುವಂತೆ ಕೆಲವರು ಆರಿಸಿದ ಜನ ಶ್ರೇಷ್ಠರಾಗುತ್ತಾರೆಂದೂ, ಅಮೇರಿಕವು (ದೇವರಿಂದ) ಆರಿಸಲ್ಪಟ್ಟ ಭೂಮಿ ಎಂದೂ ಅವನು ನಂಬುತ್ತಾನೆ. ಏಸುಕ್ರಿಸ್ತನ ಒಂದು ಪ್ರಸಿದ್ಧ ಹೇಳಿಕೆಯಲ್ಲಿ “ಬೆಟ್ಟದ ಮೇಲಿನ ನಗರ”ದ ಉಲ್ಲೇಖವಿದೆ. ಸಮಸ್ತ ಪ್ರಪಂಚಕ್ಕೋಸ್ಕರ ಈ ಆದರ್ಶ ನಗರವು ಬೆಳಕನ್ನು ನೀಡುತ್ತದೆ.  (ಇದು ಬೇರೆ ಸಂಸ್ಕೃತಿಗಳಿಗೆ ಭಾರತವು ಬೆಳಕು ತೋರಿಸುತ್ತದೆ ಎಂಬ ಬಹಳಷ್ಟು ಭಾರತೀಯರ ದೃಷ್ಟಿಕೋನದಂತೆಯೇ ಇದೆ). ಯೂರೋಪಿಯನ್ನರು ಅಮೇರಿಕಾವನ್ನು ಪ್ರವೇಶಿಸಿದಾಗ ಅವರು ಆ ಭೂಮಿಯ ಮೇಲೆ ಪ್ರಕಾಶವನ್ನು ಕಂಡರು. ಹಾಗಾಗಿ ಅವರು ತಾವು “ಬೆಟ್ಟದ ಮೇಲಿನ ನಗರ”ವನ್ನು ಪ್ರವೇಶಿಸಿದ್ದೇವೆ ಎಂದು ಭಾವಿಸಿದರು. ಬೈಬಲ್ಲಿನಲ್ಲಿ ಭರವಸೆ ನೀಡಿರುವ ನಾಡೇ ಇದು ಎಂದು ಅವರು ಭಾವಿಸಿದರು. ಆದ್ದರಿಂದ “ಅಮೇರಿಕೀಯ ವೈಶಿಷ್ಟ್ಯ”ದ ಬಲಪಂಥೀಯ ಭಾವನೆಯ ಬೇರು ಅಮೇರಿಕವೇ “ಬೆಟ್ಟದ ಮೇಲಿನ ನಗರ”, ಅದು ಈಡನ್ ಉದ್ಯಾನವನದಂತೆ ಹಚ್ಚ ಹಸಿರಾಗಿದೆ ಮುಂತಾದ ಬೈಬಲ್ಲಿನ ಕಥಾನಕಗಳಲ್ಲಿದೆ.

ಆದರೆ ಎಡಪಂಥೀಯರು ಅಮೇರಿಕದ ವೈಶಿಷ್ಟ್ಯವನ್ನು ಎತ್ತಿ ಹಿಡಿಯಲು ಬೈಬಲ್ಲಿನ ರೂಪಕಗಳನ್ನು ಬಳಸುವುದಿಲ್ಲ. ಅವರ ವೈಶಿಷ್ಟ್ಯಭಾವನೆಯ ಬೇರು ವಿಜ್ಞಾನ, ತಂತ್ರಜ್ಞಾನ, ಸ್ವಾತಂತ್ರ್ಯ ಮತ್ತು ಇನ್ನಿತರ ಮೌಲ್ಯಗಳಲ್ಲಿ ಅಮೇರಿಕದ ಶ್ರೇಷ್ಠತೆಯಲ್ಲಿದೆ. ಹೀಗಾಗಿ, ಕಾರಣಗಳು ಭಿನ್ನ ಭಿನ್ನವಾಗಿದ್ದರೂ ಅಮೇರಿಕೀಯ ವೈಶಿಷ್ಟ್ಯತೆಯ ಕಾಣ್ಕೆಯು ಎಡ ಮತ್ತು ಬಲಪಂಥಗಳೆರಡರಲ್ಲಿಯೂ ಸಮಾನವಾಗಿದೆ.

ಭಾರತದಲ್ಲಿಯಾದರೋ ಅನೇಕ ಬಗೆಯ ಭಾರತೀಯರಿದ್ದಾರೆ. ಸಾಮಾನ್ಯವಾಗಿ ಅವರು ಯಾವುದೇ ವಿಷಯದ ಮೇಲೆ ತಮ್ಮದೇ ದೃಷ್ಟಿಕೋನವನ್ನು ಹೊಂದಿದ್ದು, ಅಸಮ್ಮತಿಯನ್ನೋ ಹೋರಾಟವನ್ನೋ ಮಾಡುತ್ತಾರೆ. ಆದರೆ, ಅವರಲ್ಲಿ ಭಾರತೀಯ ವೈಶಿಷ್ಟ್ಯ ಭಾವನೆಯಿದೆಯೇ? ಬಹುಶಃ ಇದಕ್ಕೆ ವಿವರಣೆಯ, ಚರ್ಚೆಯ ಅವಶ್ಯಕತೆಯಿದೆ. ಸಂಯುಕ್ತಸಂಸ್ಥಾನದಲ್ಲಿರುವಂತೆಯೇ ವಿವಿಧ ರಾಜಕೀಯ ಸಿದ್ಧಾಂತದವರಿಗೆ ಈ ಭಾವನೆಯ ಅವಶ್ಯಕತೆಯಿದೆ. ಯಾಕೆಂದರೆ ದೇಶದಾದ್ಯಂತ ಇರುವ ಜನರನ್ನು ಇದೇ ಒಟ್ಟುಗೂಡಿಸುತ್ತದೆ. ಇದರ ವಿಷಯವಾಗಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಪಾಠವಾಗಬೇಕು, ಪ್ರತಿಯೊಬ್ಬ ವ್ಯಾಪಾರಿಯೂ ಇದನ್ನು ತಿಳಿದಿರಬೇಕು, ಪ್ರತಿಯೊಬ್ಬ ರಾಜತಾಂತ್ರಿಕನೂ ಇದನ್ನು ಎತ್ತಿಹಿಡಿಯಬೇಕು ಮತ್ತು ಪ್ರತಿಯೊಬ್ಬ ರಾಜಕಾರಣಿಯೂ ಇದರ ವಿಷಯವಾಗಿ ಮಾತನಾಡಬೇಕು. ಪಥಸಂಚಲನಗಳ ಮೂಲಕ, ದೊಡ್ಡ ದೊಡ್ಡ ಸಂಗ್ರಹಾಲಯಗಳ ಮೂಲಕ, ಅಮೇರಿಕದ ಧ್ವಜ ಮತ್ತು ಇನ್ನೂ ಅನೇಕ ಚಿಹ್ನೆಗಳ ಮೂಲಕ ಅಮೇರಿಕದ ವೈಶಿಷ್ಟ್ಯವು ಜನರನ್ನು ತಲುಪುತ್ತದೆ. ಅಮೇರಿಕದ ಧ್ವಜಕ್ಕೆ ಒಬ್ಬ ದೇವತೆಯ ಸಮಾನವಾದ ಸ್ಥಾನವಿದೆ ಎಂಬುದನ್ನೂ, ಅದರ ಮಡಿಸುವಿಕೆ, ಸಾಗಿಸುವಿಕೆ ಮುಂತಾದವುಗಳ ಸಂಬಂಧವಾಗಿ ವಿಸ್ತಾರವಾದ ಆಚರಣೆಗಳಿವೆ ಎಂಬುದನ್ನೂ ನಾವು ಕಾಣುತ್ತೇವೆ.

ಅವರ ರಾಷ್ಟ್ರಗೀತೆಯ ವಿಷಯವೂ ಹೀಗೆಯೇ. ಸಂಯುಕ್ತಸಂಸ್ಥಾನದಲ್ಲಿ ಇವೆಲ್ಲವೂ ಗೌರವಿಸಲ್ಪಡುತ್ತವೆ, ಅದೂ ಒಂದು ಸಹಜ ಕರ್ತವ್ಯವಾಗಿ. ಆದರೆ ಇಂತಹ ಲಾಂಛನಗಳು ಭಾರತದಲ್ಲಿ ಹೆಚ್ಚಾಗಿ ಗೌರವಿಸಲ್ಪಡುವುದಿಲ್ಲ ಮತ್ತು ಈ ನಡವಳಿಕೆ ಸರಿಯೆಂದೂ ಭಾವಿಸುತ್ತಾರೆ ಎಂಬುದು ದುರದೃಷ್ಟಕರ ಸಂಗತಿಯಾಗಿದೆ. ಅಮೇರಿಕ ವೈಶಿಷ್ಟ್ಯದಲ್ಲಿರುವ ಕೆಲವು ಸಂಗತಿಗಳು ಸಾಮಾನ್ಯ ಭಾರತೀಯನಿಗೆ ಅನಾದಿಕಾಲದಿಂದಲೂ ಇಂದಿಗೂ ವಿಚಿತ್ರವೆನಿಸಬಹುದು. ಉದಾಹರಣೆಗೆ ಶಸ್ತ್ರಗಳನ್ನು ಹೊಂದಿರುವಲ್ಲಿ ಅವರ ಅಭಿಮಾನ. ಅಮೆರಿಕದ ಸಂವಿಧಾನ ಇದಕ್ಕೆ ಒಪ್ಪಿಗೆಯನ್ನಿತ್ತಿದೆ, ಏಕೆಂದರೆ ಅಮೇರಿಕವನ್ನು ಸಂಸ್ಥಾಪಿಸಿದ ಹಿರಿಯರಿಗೆ ಶಸ್ತ್ರಗಳನ್ನು ಹೊಂದಿರುವುದು ಅನಿವಾರ್ಯವಾಗಿತ್ತು. ಇಂಥವುಗಳಲ್ಲಿ ಬಹಳಷ್ಟು ಶ್ರೇಷ್ಟ ಪರಂಪರೆಯ ಭಾಗಗಳಾಗುತ್ತವೆ ಮತ್ತು ದೇಶದ ಮತ್ತು ಸಂಸ್ಕೃತಿಯ ಪ್ರತೀಕವಾಗಿ ಗೌರವಿಸಲ್ಪಡುತ್ತವೆ. ಇಂಥ ಸಂಗತಿಗಳಲ್ಲಿ ಅನೇಕವು ತರ್ಕಯೋಗ್ಯವಾಗಿರಬೇಕೆಂದೇನಿಲ್ಲ, ಅವು ಪ್ರಚಲಿತ ಪುರಾಣದಲ್ಲಿಯ ಭಾಗಗಳಷ್ಟೇ.

ವೈಶಿಷ್ಟ್ಯಭಾವನೆಯುಳ್ಳ ಬೇರೆ ಸಂಸ್ಕೃತಿಗಳು/ ದೇಶಗಳು

ಬೇರೆ ದೇಶ/ಸಂಸ್ಕೃತಿಗಳಲ್ಲೂ ಸಮಾನ ರೀತಿಯ ಭಾವನೆಗಳನ್ನು ಕಾಣಬಹುದು. ಜಪಾನೀಯರು, ಕೊರಿಯನ್ನರು, ಚೀನೀಯರು ಮತ್ತು ಇನ್ನೂ ಅನೇಕರು ಇಂತಹ ಪ್ರಚಲಿತ ಪುರಾಣಗಳನ್ನು ಹೊಂದಿದ್ದಾರೆ ಮತ್ತು ಅವುಗಳನ್ನು ಪ್ರಚಾರಮಾಡುತ್ತಾರೆ. ಚೀನೀಯರು ಇದನ್ನು ಪ್ರಪಂಚದಾದ್ಯಂತ ನೂರಾರು ಶಾಖೆಗಳನ್ನು ಹೊಂದಿರುವ ಚೈನಾ ಸಂಸ್ಥೆಗಳ ಮೂಲಕ ಪ್ರಚಾರ ಮಾಡುತ್ತಾರೆ. ತಾವು ಆಧುನಿಕಗೊಳ್ಳುತ್ತಿರುವುದಾಗಿಯೂ, ಅದು ಪಾಶ್ಚಾತ್ಯೀಕರಣವಲ್ಲವೆಂದೂ ಅವರು ತಮ್ಮ ಪ್ರಚಾರದೊಂದಿಗೆ ಹೇಳುತ್ತಾರೆ. ತಮ್ಮ ಆಧುನಿಕೀಕರಣದ ತಳಹದಿಯು ಪ್ರಾಚೀನ ತತ್ತ್ವಶಾಸ್ತ್ರಜ್ಞ ಕನ್ಫ್ಯೂಶಿಯಸ್-ನ ಬೋಧನೆಗಳಲ್ಲಿದೆ ಎನ್ನುತ್ತಾರೆ. ಬೇರೆ ಮಾತಿನಲ್ಲಿ ಹೇಳುವುದಾದರೆ, ಅವರ ಆಧುನಿಕತೆಯು ಕನ್ಫ್ಯೂಶಿಯನ್ ಆಧುನಿಕತೆ. ಇಂತಹ ವೈಶಿಷ್ಟ್ಯ-ಕಥಾನಕಗಳ ಭೂತಕನ್ನಡಿಯ ಮೂಲಕ ಅಮೆರಿಕನ್ನರು, ಜಪಾನೀಯರು, ಕೊರಿಯನ್ನರು ಮತ್ತು ಚೀನೀಯರು ತಮ್ಮನ್ನು ಮತ್ತು ವಿಶಾಲ ಪ್ರಪಂಚದ ಮೌಲ್ಯಮಾಪನ ಮಾಡುತ್ತಾರೆ. ಅಮೆರಿಕನ್ನರು ಭಾರತವನ್ನು ತಮ್ಮ ಅಮೆರಿಕಾ ವೈಶಿಷ್ಟ್ಯದ ಕನ್ನಡಕದ ಮೂಲಕವೇ ಅಧ್ಯಯನ ಮಾಡುತ್ತಾರೆ. ಅಂತಹ ಅಧ್ಯಯನಗಳು ವಿಸ್ತಾರವೂ ಅಪಾರವೂ ಆಗಿದ್ದು “ದಕ್ಷಿಣ ಏಷ್ಯಾದ ಅಧ್ಯಯನಗಳು” ಎಂಬ ಶಿರೋನಾಮೆಯಡಿಯಲ್ಲಿ ವರ್ಗೀಕರಿಸಲಾಗಿದೆ. ಇದು ಅಮೆರಿಕನ್ನರಿತ್ತ ಹೆಸರಾಗಿದ್ದು ಯೂರೋಪಿನಲ್ಲಿ. ಈ ಅಧ್ಯಯನವನ್ನು ಇಂಡಾಲಜಿ ಎಂಬ ಹೆಸರಿನಿಂದ ಮಾಡಲಾಗುತ್ತದೆ.

ವೈಶಿಷ್ಟ್ಯಭಾವನೆಯೆಂಬ “ಭೂತಗನ್ನಡಿ”

ಚರ್ಚು, ಫೋರ್ಡ್ ಫೌಂಡೇಶನ್-ನಂತಹ ಸಂಸ್ಥೆಗಳು ಎಲ್ಲ ಕಾಲದಲ್ಲಿಯೂ ಭಾರತದ ಅಧ್ಯಯನವನ್ನು ಮಾಡುತ್ತಿರುತ್ತವೆ. ಭಾರತದಲ್ಲಿ ಅವು ಖಾಸಗಿ ಸಂಸ್ಥೆಗಳಿಗಷ್ಟೇ ಅಲ್ಲದೆ ಹೆಸರಾಂತ ಮತ್ತು ಚಾಲ್ತಿಯಲ್ಲಿರುವ ಥಿಂಕ್ ಟ್ಯಾಂಕ್-ಗಳಿಗೂ ಧನಸಹಾಯವನ್ನು ಮಾಡುತ್ತವೆ. ಸಂಯುಕ್ತ ಸಂಸ್ಥಾನದ ಅನೇಕ “ಥಿಂಕ್ ಟ್ಯಾಂಕ್”ಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿವೆ. ಅವುಗಳು ಭಾರತದ ವಿವಿಧ ಭಾಗಗಳಲ್ಲಿ ಶಾಖೆಗಳನ್ನು ತೆರೆದಿವೆ ಮತ್ತು ತಮ್ಮ ಭೂತಗನ್ನಡಿ ಸಹಾಯದಿಂದ ಭಾರತದ ಅಧ್ಯಯನವನ್ನು ಮಾಡುತ್ತಿವೆ. ನಾವು ದೃಷ್ಟಿಯನ್ನು ಹಿಂತಿರುಗಿಸಿ ಚೀನಾವೋ, ಸಂಯುಕ್ತಸಂಸ್ಥಾನವೋ ಅಥವಾ ಯಾವುದೇ ಬೇರೆ ದೇಶದ ಮೇಲೆ ಪೂರ್ವಪಕ್ಷವನ್ನು ಸ್ಥಾಪಿಸುವುದಾದರೆ, ನಮ್ಮ ಭೂತಗನ್ನಡಿ ಎಂತಹುದೆಂಬುದನ್ನು, ನಮ್ಮ ತಾರ್ಕಿಕ ತಳಹದಿ ಎಂತಹುದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಈ ತಳಹದಿಯ ಮೇಲೆಯೇ ನಾವು ನಮ್ಮ ಪೂರ್ವಪಕ್ಷವನ್ನು ಸ್ಥಾಪಿಸಲು ಸಮರ್ಥರಾಗುತ್ತೇವೆ.

ಈ ತಾರ್ಕಿಕ ಚಿಂತನೆಗಳು ಅಮೆರಿಕಾ ವೈಶಿಷ್ಟ್ಯಭಾವನೆಯ ರೀತಿಯಲ್ಲೇ ನಮ್ಮ ಭೂತಗನ್ನಡಿಯಾಗಿ ಕಾರ್ಯನಿರ್ವಹಿಸುತ್ತವೆ. ಹಳೆಯ ತಲೆಮಾರಿನಲ್ಲಿ, ಭಾರತದ ಕಥಾನಕವು ರಾಮಾಯಣವಾಗಿತ್ತು. ಬಹಳಷ್ಟು ಹಳ್ಳಿಗಳಲ್ಲಿ ರಾಮಲೀಲಾ ನಾಟಕವನ್ನು ಆಡಲಾಗುತ್ತಿತ್ತು. ಇದರಲ್ಲಿ ಎಲ್ಲರೂ ಸೇರಿ, ಭಾಗವಹಿಸಿ ಪರಸ್ಪರ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುತ್ತಿದ್ದರು. ಜನರು ತಮ್ಮ ತಮ್ಮದೇ ಬಗೆಯ ರಾಮಾಯಣವನ್ನೂ ನಾಟಕವಾಡುತ್ತಿದ್ದರು. ಅದು ಸಮುದಾಯದ ಕಾರ್ಯಕ್ರಮವಾದ್ದರಿಂದ ಕಥೆಯಲ್ಲಿ ಎಲ್ಲರ ವೈಯಕ್ತಿಕ ಭಾಗವಹಿಸುವಿಕೆ ಮತ್ತು ಪಾಲುದಾರಿಕೆ ಇರುತ್ತಿತ್ತು. ದೂರದರ್ಶನದ ಆವಿಷ್ಕಾರದೊಂದಿಗೆ, ಸಮುದಾಯಗಳ ವೈಯಕ್ತಿಕ ಭಾಗವಹಿಸುವಿಕೆ ನಷ್ಟವಾಗಿ, ದೂರದರ್ಶನದಲ್ಲಿ ಬೇರೆ ಯಾರಿಂದಲೋ ಮಾಡಿದ ನಾಟಕದ ಪ್ರದರ್ಶನವನ್ನು ನೋಡುವಂತಾಯಿತು. ರಾಮಾಯಣದಿಂದ ಒಂದು ಬಗೆಯ ಬೇರ್ಪಡೆಯುಂಟಾಗಲು ಇದು ಕಾರಣವಾಯಿತು.

ಅಸ್ಮಿತೆಯ ಪ್ರಶ್ನೆಗಳು ಪಂಡಿತರನ್ನೂ ಗೊಂದಲಕ್ಕೆ ದೂಡುತ್ತವೆ

ಭಾರತೀಯ ಅಸ್ಮಿತೆಯು ಪಂಡಿತರಿಗೂ ಕೂಡ ಅಷ್ಟೊಂದು ಸ್ಪಷ್ಟವಾಗಿದ್ದಂತೆ ಕಾಣುವುದಿಲ್ಲ, ಅಥವಾ ಅದನ್ನು ಅರ್ಥಮಾಡಿಕೊಳ್ಳದಿರಲು ನಿರ್ಧರಿಸಿರುವಂತೆ ಕಾಣುತ್ತದೆ. ಉದಾಹರಣೆಗೆ,  ೪೫ ವರ್ಷಗಳಿಂದ ನಡೆಯುತ್ತಿರುವ ನನ್ನ ನಿಯಮಿತ ಭಾರತ ಭೇಟಿಯಲ್ಲಿ, ನಾನು ಆಶಿಶ್ ನಂದಿಯನ್ನು ಸಂಪರ್ಕಿಸಿ ಅವರ ಪರಿಚಯವನ್ನು ಕೇಳಿದೆ. ಅದರ ಉತ್ತರವಾಗಿ ಆಶಿಶ್ ಭಾರತವನ್ನು ತನ್ನ ಪರಿಚಯದ ಭಾಗವಾಗಿ ಉದ್ಧರಿಸದೆಯೇ ಮೊದಲು ತಾನು ಬಂಗಾಳಿ ಎಂದೂ, ನಂತರ ಕ್ರೈಸ್ತನೆಂದೂ ಮತ್ತು ನಂತರ ಒಬ್ಬ ವಿದ್ವಾಂಸನೆಂದೂ ಹೇಳಿದರು.  ಇನ್ನೂ ವಿವರವಾಗಿ ಇದರ ಬಗ್ಗೆ ಕೇಳಿದಾಗ, “ಭಾರತೀಯ” ಅಸ್ಮಿತೆಯು ಉಗ್ರ ದೇಶವಾದಿಗಳಿಂದ ಜನರ ಮೇಲೆ ಹೇರಲ್ಪಟ್ಟಿದೆಯೆಂದು ಹೇಳಿದರು. ನಂತರ ನಾನು ಕೇಳಿದೆ – ಅಮೆರಿಕಾ ಮತ್ತು ಚೈನಾ ದೇಶಗಳಲ್ಲಿರುವಂತೆ ಭಾರತೀಯತೆಯ ನಿರೂಪಣೆ ಯಾವುದರಿಂದ ಮಾಡಬಹುದು? ಏಕೆಂದರೆ ಇಷ್ಟೊಂದು ವೈವಿಧ್ಯದಿಂದ ಕೂಡಿದ್ದರೂ ಭಾರತೀಯರು ಇತಿಹಾಸದಾದ್ಯಂತ ಒಂದಾಗಿದ್ದರು ಎಂಬುದಕ್ಕೆ ಕಾರಣ ಮತ್ತು ಮುಂದೆ ಕೂಡ ಭಾರತವು ಯಾಕೆ ಒಂದು ಸಮಗ್ರ ರಾಷ್ಟ್ರವಾಗಿ ಮುಂದುವರೆಯಬೇಕು ಎಂಬುದಕ್ಕೆ ಕಾರಣ ಬೇಕಲ್ಲ! ಅವರು ತಮಗೆ ಈ ಪ್ರಶ್ನೆಯ ಉತ್ತರ ಗೊತ್ತಿಲ್ಲ ಎಂದು ಪ್ರಾಮಾಣಿಕವಾಗಿ ತಿಳಿಸಿದರು.

ಹಿಂದಿನ ಸರ್ಕಾರದಲ್ಲಿ ರಾಷ್ಟ್ರಿಯ ಏಕೀಕರಣ ಸಮಿತಿಯ ಮುಖ್ಯಸ್ಥರಾಗಿದ್ದ ಜಾನ್ ದಯಾಳರಂತಹ ಕೆಲವರ ದೃಷ್ಟಿಕೋನಗಳು ಈ ದೇಶದ ಏಕತೆಯ ದೃಷ್ಟಿಯಿಂದ ಅನುಕೂಲಕರವಾಗಿಲ್ಲ.

ಐಎಫ್ಎಸ್ ಶಿಕ್ಷಾರ್ಥಿಗಳಿಗೂ ಕೂಡ “ಭಾರತೀಯ ಮುದ್ರೆ” ಗೊತ್ತಿಲ್ಲ

ಇದು ನಮ್ಮನ್ನು ಪ್ರಶ್ನೆಗೀಡುಮಾಡುತ್ತದೆ: “ಭಾರತೀಯ ಮುದ್ರೆ” ಎಂದರೆ ನಿಜವಾಗಿ ಏನು? ಒಂದು ಉದಾಹರಣೆಯ ಮೂಲಕ ನಾನು ಇದನ್ನು ವಿವರಿಸುತ್ತೇನೆ. ಕೆಲವು ಕಾಲದ ಹಿಂದೆ ವಿದೇಶಾಂಗ ಸಚಿವಾಲಯದ ವಿದೇಶೀಯ ಸೇವೆಗಳ ಸಂಸ್ಥೆಯು ನನ್ನನ್ನು ಒಂದು ಭಾಷಣಕ್ಕಾಗಿ ಕರೆಸಿತ್ತು. ಅಲ್ಲಿ ಯುವ ವಿದ್ಯಾರ್ಥಿಗಳ ವರ್ಗದಲ್ಲಿ ನಾನು ರಾಜತಾಂತ್ರಿಕರಿಗೆ – ಭಾರತವೊಂದು ಶ್ರೇಷ್ಠತೆಯ ಚಿಹ್ನೆ ಮತ್ತು ಅವರು ಅದನ್ನು ಪ್ರತಿನಿಧಿಸಬೇಕು ಎಂದು, ಭಾರತೀಯ ಪರಂಪರೆಯ ಮಹತ್ವದ ಬಗ್ಗೆ, ಅದರ ವಿಶಿಷ್ಟತೆಯ ಬಗ್ಗೆ – ಹೀಗೆ ಮಾತನಾಡುತ್ತಾ ಹೋದೆ. ಬಹಳ ಕಾಲದಿಂದಲೂ ಹೇಗೆ ಗಣಿತ, ವಿಜ್ಞಾನ, ತತ್ತ್ವಶಾಸ್ತ್ರ, ಯೋಗ ಮತ್ತು ಇನ್ನಿತರ ಪ್ರಮುಖವಸ್ತುಗಳು ಹೇಗೆ ಭಾರತದಿಂದ ರಫ್ತಾಗಿವೆಯೆಂದೂ ನಾನು ಅವರಿಗೆ ತಿಳಿಸಿದೆ. ಭಾಷಣದ ನಂತರ ಪ್ರಶ್ನೋತ್ತರದ ಅವಧಿಯಿತ್ತು. ಆಗ ಸಭಿಕರು ಎರಡು ಗುಂಪುಗಳಾಗಿ ಮಾರ್ಪಟ್ಟರು. ಮೊದಲನೆಯ ಗುಂಪು ಭಾರತೀಯ ಭವ್ಯ ನಿರೂಪಣೆಯ ಬಗ್ಗೆ ಅಪಾರ ಅಭಿಮಾನ ಹೊಂದಿತ್ತು, ಮತ್ತು ಅದರ ಬಗ್ಗೆ ಶಾಲೆಯಲ್ಲಿ ಅಥವಾ ವಿದೇಶೀ ಸೇವೆಗಳ ಸಂಸ್ಥೆಯಲ್ಲಿ ಯಾರೂ ಅವರಿಗೆ ಕಲಿಸಲಿಲ್ಲವೆಂದು ಅವರು ಹೇಳುತ್ತಾ, ಅದರ ಬಗ್ಗೆ ತಿಳಿಯಲು ಬಯಸಿದರು.

ಎರಡನೆಯ ಗುಂಪು ಸಿಟ್ಟು ಮಾಡಿಕೊಂಡಿತ್ತು. ಅವರಲ್ಲೊಬ್ಬ ಪೂರ್ವಾಂಚಲದವನಾಗಿದ್ದ, ಈ ನಿರೂಪಣೆಯನ್ನು ನಂಬುವುದಿಲ್ಲವೆಂದು ಹೇಳಿದ. ಮತ್ತೊಬ್ಬನು ತಾನು ದಲಿತನೆಂದು ಹೇಳಿಕೊಳ್ಳುತ್ತಾ, ಇಡೀ ಜೀವನ ತುಳಿತಕ್ಕೆ ಒಳಗಾದೆನೆಂದು ಹೇಳಿದ.

ಇದು ನಮ್ಮನ್ನು ಚಿಂತೆಗೀಡುಮಾಡುತ್ತದೆ, ಏಕೆಂದರೆ ಇವರೆಲ್ಲರೂ ಭಾರತವನ್ನು ವಿದೇಶದಲ್ಲಿ ಪ್ರತಿನಿಧಿಸುವವರು. ಅವರು ಸರ್ವೋಚ್ಚ ಪ್ರಬಂಧಕರಾಗುವವರು, ಮುಖ್ಯ ರಾಯಭಾರಿಗಳಾಗುವವರು. ಅವರಿಗೆ ತಾವು ಪ್ರತಿನಿಧಿಸುವುದರ (ಭಾರತದ) ಬಗ್ಗೆ ಅರಿವಿಲ್ಲ. ಇದು ತೀರಾ ಅತಾರ್ಕಿಕ ಏಕೆಂದರೆ ಸಂಸ್ಥೆಯೊಂದರ ಮಾರಾಟ ವಿಭಾಗದ ಉಪಾಧ್ಯಕ್ಷನಿಗೆ ಆ ಸಂಸ್ಥೆಯ ಪ್ರಮುಖ ಉತ್ಪನ್ನದ ಬಗ್ಗೆ ವಿಶ್ವಾಸವಿಲ್ಲದಿದ್ದರೆ ಹೇಗೋ ಹಾಗೆ. ಇವರ ನೇಮಕಾತಿ ಪ್ರಕ್ರಿಯೆಯೂ ಕೊಂಚ ವಿಚಿತ್ರ, ಅದರಲ್ಲಿ, ದೇಶಭಕ್ತಿಯ ಮಾನದಂಡ ಅಥವಾ ಭಾರತೀಯ ನಾಗರೀಕತೆಯ ಬಗ್ಗೆ ಗೌರವವಿಲ್ಲ. ಕೇವಲ ಕೆಲವು ಪರೀಕ್ಷೆಗಳನ್ನು ಬರೆದು ಉತ್ತೀರ್ಣರಾದರಾಯಿತು. ಈ ಅಭ್ಯರ್ಥಿಗಳ ಧ್ಯೇಯವನ್ನು ಗುರುತಿಸಿ ಅವರನ್ನು ಸೋಸುವುದು ಅವಶ್ಯಕ, ಆದರೆ ಪರಿಸ್ಥಿತಿಯು ಹಾಗಿಲ್ಲವೆಂಬುದು ಅಚ್ಚರಿ.

ವಿರೋಧಿ ನಿರೂಪಣೆಗಳನ್ನು ತಿಳಿದು, ಅವುಗಳನ್ನು ನಿವಾರಿಸಬೇಕು

ಭಾರತೀಯ ನಿರೂಪಣೆಯನ್ನು ತಿಳಿಯುವ ಮೊದಲು, ಇತ್ತೀಚಿನ ದಿನಗಳಲ್ಲಿ ಚಾಲ್ತಿಯಲ್ಲಿರುವ ವಿರೋಧಿ ನಿರೂಪಣೆಯನ್ನು ತಡೆಯಬೇಕು. ಈ ವಿರೋಧೀ ನಿರೂಪಣೆಯನ್ನು ತೊಡೆದುಹಾಕಲು ಬಲವಾದ ಕಾರಣವಿದೆ. ಯಾರಾದರೂ ಹೂಬಿಡುವ ಗಿಡವನ್ನ ಬೆಳೆಸಲು ಬಯಸಿದರೆ, ಮೊದಲು ಕಳೆಯನ್ನು ಕೀಳಬೇಕಾದುದು ಅತ್ಯವಶ್ಯಕ, ಏಕೆಂದರೆ ಅವು ಹೂವುಗಳು ಚೆನ್ನಾಗಿ ಬೆಳೆಯಲು ಅವು ಅಡ್ಡಿಯನ್ನುಂಟುಮಾಡುತ್ತವೆ. ಉಪಯೋಗಿ ಮತ್ತು ಹೂಬಿಡುವ ಗಿಡಗಳನ್ನು ನೆಡುವುದು ನಿರ್ಮಾಣಕ್ಕೆ ಸಮ. ನಾವು ಗುಣಾತ್ಮಕ ಮತ್ತು ವಿಚ್ಛಿದ್ರಕಾರೀ ಯೋಚನೆಗಳನ್ನು ಒಟ್ಟಿಗೇ ಮಾಡಬೇಕು. ಕೇವಲ ಗುಣಾತ್ಮಕ ವಿಷಯಗಳ ಬಗ್ಗೆ ಮಾತನಾಡುವುದರಿಂದ ಏನನ್ನೂ ಸಾಧಿಸಲಾರೆವು. ವಿಚ್ಛಿದ್ರಕಾರಕಗಳ ಹಸ್ತಕ್ಷೇಪವಿಲ್ಲದಿದ್ದರೆ (ವಿರುದ್ಧ ನಿರೂಪಣೆಯನ್ನು ತೊಡೆದುಹಾಕದಿದ್ದರೆ) ಗುಣಾತ್ಮಕ ಅಂಶಗಳು ಹೆಚ್ಚು ಬಾಳಲಾರವು.

ಭಾರತದ ಬೌದ್ಧಿಕ ವರ್ತುಲದಲ್ಲಿ ವಾಮಪಂಥವು ಹೆಚ್ಚು ಸಕ್ರಿಯವಾಗಿದೆ. ನಾನು ಅದನ್ನು ಚೆನ್ನಾಗಿ ವಿಶ್ಲೇಷಿಸಿದ್ದೇನೆ ಮತ್ತು ಪಶ್ಚಿಮದ ಚಿಂತನೆಯ ಬಗ್ಗೆ ಪೂರ್ವಪಕ್ಷ ಮಾಡಿದ್ದೇನೆ. ಇದಕ್ಕೂ ಮಿಗಿಲಾಗಿ, ‘ಭಾರತಭಂಜನ’ ಪುಸ್ತಕದಲ್ಲಿ ಭಾರತವನ್ನು ವಿಭಜಿಸುತ್ತಿರುವ ಶಕ್ತಿಗಳ ಬಗ್ಗೆ ಚರ್ಚಿಸಿದ್ದೇನೆ. ಆ ಪುಸ್ತಕದಲ್ಲಿ, ಹೇಗೆ ಈ ಶಕ್ತಿಗಳು ವಿದೇಶೀ ಅನೈತಿಕ ಶಕ್ತಿಗಳು, ಮತೀಯ ಕೇಂದ್ರಗಳು, ಸಂಸ್ಥೆಗಳು, ವಿಚಾರ ವೇದಿಕೆಗಳೊಂದಿಗೆ ಜೋಡಿಸಲ್ಪಟ್ಟಿವೆ ಎಂದು ವಿವರಿಸಲಾಗಿದೆ. ಅನೇಕ ಭಾರತೀಯರು ಅಂತಹ ಪಡೆಗಳನ್ನು ಸೇರಿದ್ದಾರೆ. ಆದ್ದರಿಂದ, ಅವರು ಆ ಪಡೆಗಳ ಸಿಪಾಯಿಗಳು. ಈ ಸಿಪಾಯಿಗಳು ಹಣಕ್ಕಾಗಿ ಕೆಲಸ ಮಾಡುತ್ತಾರೆ. ಕೆಲವರು ಆ ಸಂಸ್ಥೆಗಳ ಧ್ಯೇಯಕ್ಕೆ ಸಮನಾದ ಧ್ಯೇಯ ಹೊಂದಿದ್ದಾರೆ.  ಆದರೆ, ಅವರು ಭಾರತಭಂಜನದ ಉದ್ದೇಶ ಹೊಂದಿದ್ದಾರೆ.

ಅಮೆರಿಕಾದಲ್ಲಿ ನಾನು ಭಾಷಣ ಮಾಡುವಾಗ, ಭಾರತವನ್ನು ಪ್ರತಿನಿಧಿಸುತ್ತೇನೆಂದು ಹೇಳುವಾಗ ಅಥವಾ ಈ ಕಲ್ಪನೆಯು ಭಾರತೀಯವಲ್ಲ ಎಂದು ಹೇಳಿದಾಗ, ಅನೇಕರು ನನಗೆ ಪ್ರಶ್ನೆಗಳ ಸವಾಲನ್ನೇ ಒಡ್ಡುತ್ತಾರೆ : ಯಾರ ಭಾರತ ? ದಲಿತರ ಭಾರತವೋ ? ಮುಸ್ಲಿಮರ ಭಾರತವೋ ? ಬ್ರಾಹ್ಮಣರ ಭಾರತವೋ ? ಅಥವಾ ಮಹಿಳೆಯರು ಕೊಲ್ಲಲ್ಪಡುವ ಭಾರತವೋ ? ಇತ್ಯಾದಿ. ಭಾರತವನ್ನು ವಿಭಜಿಸುವ ಮತ್ತು ಭಂಜಿಸುವ ಅವರ ಉದ್ದೇಶ ಅತ್ಯಂತ ಸ್ಪಷ್ಟ. ಇದಕ್ಕಾಗಿ ಅವರು ‘ಉಪ ರಾಷ್ಟ್ರೀಯತೆ’ ಎಂಬ ಪದವನ್ನು ಅವರು ಬಳಸುತ್ತಾರೆ. ‘ಉಪ ರಾಷ್ಟ್ರೀಯತೆ’ಯೆಂದರೆ ಒಂದು ರಾಷ್ಟ್ರ ಅಥವಾ ರಾಷ್ಟ್ರೀಯ ಅಸ್ಮಿತೆ ಎಂಬುದಿಲ್ಲ, ಬದಲಾಗಿ ಕೆಲವು ಪುಟ್ಟ ದೇಶಗಳಿವೆ ಮತ್ತು ಪಂಥೀಯ ಅಸ್ಮಿತೆಗಳಿವೆ. ನಾವು ಏಕರೂಪವಾದ ನಿರೂಪಣೆಯನ್ನು ಅಂತಹ ಪುಟ್ಟ ದೇಶಗಳ ಮೇಲೆ ಹೇರುತ್ತಿದ್ದೇವೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಇಂತಹ ಅಧ್ಯಯನಗಳನ್ನು ಉಪ-ಗುಂಪು ಅಧ್ಯಯನವೆಂದು ಕರೆಯುತ್ತಾರೆ ಮತ್ತು ಅವುಗಳ ಉದ್ದೇಶ ಭಾರತೀಯ ಭವ್ಯ ನಿರೂಪಣೆಯನ್ನು ವಿಭಜಿಸುವುದು ಮತ್ತು ಭಂಜಿಸುವುದೇ ಆಗಿದೆ.

ಭಾರತೀಯ ಇತಿಹಾಸದ ತಪ್ಪು ವ್ಯಾಖ್ಯಾನ

ಕ್ರೂರವಾದ ವಿದೇಶೀ ಆಕ್ರಮಣಗಳ ಇತಿಹಾಸದ ಬಗ್ಗೆ ಸುಳ್ಳು ಸುದ್ದಿಯನ್ನು ಹಬ್ಬಿಸಿ ಅಂತಹ ಆಕ್ರಮಣಗಳನ್ನು ಸಮರ್ಥಿಸುವ ಪರಿಪಾಠವಿದೆ. ಆ ಸಮರ್ಥನೆಯಲ್ಲಿ, ಆಕ್ರಮಣಕಾರರು ಭಾರತಕ್ಕೆ ಬಂದು ಆಕ್ರಮಣ ಮಾಡಿದ ಕಾರಣವೆಂದರೆ, ಮಾನವ ಹಕ್ಕುಗಳ ಉಲ್ಲಂಘನೆಯಾಗಿತ್ತು. ಮತ್ತು ಆ ಆಕ್ರಮಣಗಳು ತುಳತಕ್ಕೊಳಗಾದ ಅಂತಹವರ ಬಿಡುಗಡೆಗಾಗಿ ಆದವು. ತುಳಿತದ ಬಗ್ಗೆ ಆಗುವ ಅಂತಹ ಚರ್ಚೆಗಳೆಂದರೆ : ಆರ್ಯರು ದ್ರಾವಿಡರನ್ನು ತುಳಿದುದು, ಬ್ರಾಹ್ಮಣರು ದಲಿತರನ್ನು ತುಳಿದುದು, ಹಿಂದುಗಳು ಮುಸ್ಲಿಮರನ್ನು ತುಳಿದುದು ಮುಂತಾದವು. ಪ್ರತ್ಯೇಕತಾವಾದವು ಮೊದಲು ಸೈದ್ಧಾಂತಿಕವಾಗಿ ಆರಂಭವಾಗಿ ತದನಂತರ ಹಿಂಸೆಗೆ ತಿರುಗುತ್ತದೆ. ಸೈದ್ಧಾಂತಿಕ ಪ್ರತ್ಯೇಕತಾವಾದವು ಹಣದಿಂದ, ಅದಕ್ಕೆ ಹೊಂದುವ ಬೌದ್ಧಿಕ ಚಿಂತನೆಗಳಿಂದ ಮತ್ತು ಅನೈತಿಕ ದೇಶ/ಸಂಘಟನೆಗಳ ಮುಖಾಂತರ ಸಂಶೋಧನೆ, ಪ್ರಶಿಕ್ಷಣ ಪಡೆದು ಪುಷ್ಟಿ ಪಡೆಯುತ್ತದೆ.

ಆಧ್ಯಾತ್ಮಿಕತೆಯ ವಿಪರೀತ ಕಲ್ಪನೆ

ಈ ಸಮಸ್ಯೆಗೆ ನಮ್ಮ ಗುರೂಜಿಗಳದೂ ಕೊಡುಗೆ ಇದೆ. ಅವರ ಚಿಂತನೆಗಳು ಉದಾತ್ತವಾಗಿದ್ದರೂ ಕೂಡ, ಅವರು ಗೊಂದಲಗಳನ್ನು ಉಂಟುಮಾಡುತ್ತಾರೆ. ಸಾಮಾನ್ಯವಾಗಿ ಅದ್ವೈತವನ್ನು ವೈಯಕ್ತಿಕವಾಗಿ ಮತ್ತು ಬಹ್ಮ ಎಂಬ ಎರಡು ಮಟ್ಟದಲ್ಲಿ ಕಲಿಸಲಾಗುತ್ತದೆ. ಈ ಎರಡು ಮಟ್ಟಗಳ ಮಧ್ಯದಲ್ಲಿ ಪರಿವಾರ, ಗ್ರಾಮ, ಸಮುದಾಯ, ಸಮಾಜ, ರಾಷ್ಟ್ರ ಮುಂತಾದ ಅನೇಕ ಮಟ್ಟಗಳಿವೆ. ಈ ಮಟ್ಟಗಳ ಇರುವಿಕೆಯನ್ನು ಕಲಿಸಲಾಗುವುದಿಲ್ಲ. ಹೇಳಿಕೊಟ್ಟಿರುವುದೇನೆಂದರೆ, ಈ ಎಲ್ಲ ಹಂತಗಳನ್ನು ದಾಟಿ ಬ್ರಹ್ಮಮಟ್ಟವನ್ನು ತಲುಪಬಹುದು. ಆದರೆ, ನಾವು ರಾಷ್ಟ್ರದ ಬಗೆಗೆ ಚಿಂತಿಸಬೇಕು, ಅದನ್ನು ರಕ್ಷಿಸಬೇಕು. ಅವರು ಈ ಸಮಸ್ಯೆಗಳನ್ನು ಎದುರಿಸಲೂ ಹೆದರುತ್ತಾರೆ. ಅವರ ದೃಷ್ಟಿಯಲ್ಲಿ, ಇದು ಕೇವಲ ವಿವಾದಾತ್ಮಕ. ದೇವಸ್ಥಾನದ ಆವರಣದಲ್ಲಿಯೂ ಈಗ್ಗೆ 20-25 ವರ್ಷಗಳಿಂದೀಚೆಗೆ ಇಂತಹ ಮಾತುಗಳನ್ನಾಡಲೂ ಅವಕಾಶವಿರಲಿಲ್ಲ, ಏಕೆಂದರೆ ಅವರ ದೃಷ್ಟಿಯಲ್ಲಿ ಅದು ವಿವಾದಾತ್ಮಕವಾದುದು. ಚರ್ಚ್, ಸಿನಗಾಗ್, ಮದ್ರಸಾ ಮತ್ತು ಬೌದ್ಧ ದೇವಾಲಯಗಳಲ್ಲಿ ಈ ಪರಿಸ್ಥಿತಿ ಇಲ್ಲ. ಅಲ್ಲಿ ಸಮಾಜವನ್ನು ಬಾಧಿಸುವ  ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ವಿಷಯಗಳ ಬಗ್ಗೆ ಚರ್ಚೆಗೆ ಅವಕಾಶವಿದೆ. ಆದರೆ, ಸಾಮಾನ್ಯ ಹಿಂದುವು ಇಂತಹ ಚರ್ಚೆಯನ್ನು ಮಾಡಲು ಹೆದರುತ್ತಾನೆ.

ಸೆಪ್ಟೆಂಬರ್ 11ರ ನಂತರ ಈ ಪರಿಸ್ಥಿತಿಯು ಕ್ರಮೇಣ ಸುಧಾರಿಸುತ್ತಿದೆ. ಬೇರೆ ಸಮುದಾಯ ಮತ್ತು ನಿಷ್ಠೆಯುಳ್ಳ ಜನರು ಈ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯನ್ನು ಆರಂಭಿಸಿರುವ ಕಾರಣ, ಹಿಂದೂಗಳೂ ಅವುಗಳನ್ನು ಮಾಡಲಾರಂಭಿಸಿದ್ದಾರೆ. ಆದರೆ, ಈಗಲೂ ಕೂಡ ಭಾರತದಲ್ಲಿ ಅನೇಕ ‘ಗುರೂಜಿ’ಗಳು ವಿವಾದಾತ್ಮಕ ಎಂಬ ಕಾರಣವೊಡ್ಡಿ ಇಂತಹ ಚರ್ಚೆಗೆ ಹೆದರುತ್ತಾರೆ. ಭಗವದ್ಗೀತೆಯು ಧರ್ಮ ಮತ್ತು ಅಧರ್ಮವನ್ನು ಕುರುತು ಚರ್ಚಿಸುತ್ತದೆ. ಈ ಜಗತ್ತಿನಲ್ಲಿರುವ ಯಾವುದೇ ವ್ಯಕ್ತಿಯು ಕೇವಲ ಆಧ್ಯಾತ್ಮಿಕನಾಗಲಾರ. ಆತನಿಗೆ ಸಾಮಾಜಿಕ ಕರ್ತವ್ಯಗಳೂ ಇರುತ್ತವೆ. ಇಲ್ಲದಿದ್ದರೆ, ಮಹಾಭಾರತ, ಗೀತೆ ಮುಂತಾದ ಉದ್ಗ್ರಂಥಗಳು ಏತಕ್ಕಾಗಿ ?

ಧರ್ಮಶಾಸ್ತ್ರ ಮತ್ತು ಅರ್ಥಶಾಸ್ತ್ರಗಳ ಅಧ್ಯಾಪನ ನಿರೀಕ್ಷಿತ ಪ್ರಮಾಣದಲ್ಲಿಲ್ಲ. ಗೀತೆ ಮತ್ತು ಅದ್ವೈತಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಗೀತೆ ಮತ್ತು ಅದ್ವೈತಗಳು ಆವಶ್ಯಕ ಎಂಬುದೇನೋ ನಿಜ. ಆದರೆ, ನಾವು ಪ್ರಾಯೋಗಿಕವಾದ, ಸಾಮಾಜಿಕ ಮತ್ತು ರಾಜಕೀಯ ಪಠ್ಯಗಳನ್ನೂ ಪರಿಚಯಿಸಬೇಕಿದೆ. ‘ಗುರೂಜಿ’ಗಳು ವಿವಾದಾತ್ಮಕವೆಂದು ಹೆದರಿಕೊಳ್ಳಬೇಕಾಗಿಲ್ಲ. ಏಕೆಂದರೆ, ಜಗತ್ತೇ ವಿವಾದಾತ್ಮಕವಾಗಿದೆ. ನಾವು ಈಗ ಅವುಗಳನ್ನು ಪರಿಹರಿಸದಿದ್ದರೆ, ನಮ್ಮ ಮುಂದಿನ ಪೀಳಿಗೆ ಹೇಗೆ ಅವುಗಳನ್ನು ಎದುರಿಸಿಯಾರು ?

ಬುದ್ಧಿಜೀವಿಗಳ ರಾಜಿ

ಅನೇಕ ಭಾರತೀಯ ಬುದ್ಧಿಜೀವಿಗಳು ಪಶ್ಚಿಮದ ಭವ್ಯ ನಿರೂಪಣೆಯ ಭಾಗವಾಗಲು ಬಯಸುತ್ತಾರೆ. ಧರ್ಮಕ್ಕೆ ಸಂಬಂಧಿಸಿದ ವಿಷಯಗಳನ್ನು ಎದುರಿಸಬೇಕಾಗಿ ಬಂದಾಗ, ಅವರು ಮುಜುಗರಕ್ಕೀಡಾಗುತ್ತಾರೆ. ಪಶ್ಚಿಮದ ಭವ್ಯ ನಿರೂಪಣೆಯ ಸಣ್ಣ ಪಾತ್ರವಾದರೂ ಸರಿಯೆಂದು ಭಾವಿಸುವರೇ ಹೊರತು, ಭಾರತೀಯತೆಯ ಭವ್ಯ ನಿರೂಪಣೆಯ ಹೆಮ್ಮೆಯ ಭಾಗವಾಗುವ ಅವಕಾಶವಿದ್ದರೂ ಅದರ ಭಾಗವಾಗಲು ಬಯಸರು. ವಿಭಿನ್ನತೆ ಎಂಬ ಪುಸ್ತಕದಲ್ಲಿ ನಾನು ತಿಳಿಸಿರುವಂತೆ, ಆತ್ಮಹೀನತಾಭಾವವು ಇಲ್ಲಿ ಕೆಲಸ ಮಾಡುತ್ತದೆ.

ಗುರುತಿನ ಗೊಂದಲಕ್ಕೀಡುಮಾಡುವ ಆತ್ಮಹೀನತಾಭಾವ

ಭಾರತೀಯತೆಯ ಭವ್ಯ ನಿರೂಪಣೆಯನ್ನು ರೂಪಿಸುವ ವಿಷಯ ಬಂದಾಗ, ಬಲವಾದ ಆತ್ಮಹೀನತಾಭಾವವನ್ನು ನಾವು ಮುಖಾಮುಖಿ ಮಾಡಿಕೊಳ್ಳಲೇಬೇಕು. ನನ್ನ ಕೆಲವು ಮುಸ್ಲಿಂ ಮಿತ್ರರಲ್ಲಿ ಈ ಆತ್ಮಹೀನತಾಭಾವದ ಮಹತ್ವವನ್ನು ನಾನು ಕಂಡಿದ್ದೇನೆ. ಬಾಲ್ಯದಲ್ಲಿ ಅವರು ನನ್ನೊಡನೆ ಸ್ನೇಹದಿಂದಲೇ ಇದ್ದರು. ಬಳಿಕ ಅವರು ಅರಬ್ ಭವ್ಯ ನಿರೂಪಣೆಯನ್ನು ಅನುಸರಿಸಲು ಬಯಸಿದರು, ಏಕೆಂದರೆ ಅದು ಅವರಿಗೆ ಫ್ಯಾಶನ್ ಆಗಿತ್ತು. ಅರಬರು ಎಲ್ಲರಿಗಿಂತ ಶ್ರೇಷ್ಠರೆಂದು ಅವರು ತಿಳಿದಿದ್ದರಾದ್ದರಿಂದ, ಅರಬರ ಹಾಗೆ ಇರುವುದೇ ಅವರಿಗೆ ಸರಿಯಾದ ದಾರಿಯಂತೆ ಆಗಿತ್ತು. ಶಿಯಾ ಸಮುದಾಯದವರ ಕಥೆಯೂ ಕೂಡ ಹೀಗೆಯೇ. ಅವರಿಗೆ ಭಾರತೀಯ ನಿರೂಪಣೆಯ ಬಗ್ಗೆ ಆತ್ಮಹೀನತಾಭಾವ ಇರುವ ಕಾರಣ, ಪರ್ಶಿಯನ್ ನಿರೂಪಣೆಗೆ ಅವಲಂಬಿತರಾಗಿದ್ದಾರೆ. ಇಂತಹ ಪರಿಸ್ಥಿತಿಯು, ಜಗತ್ತಿನ ಯಾವುದೇ ಪ್ರದೇಶದಲ್ಲಿ ಪ್ರಾದೇಶಿಕ ಭಾಷೆ, ಪದ್ಧತಿ ಮತ್ತು ಸಂಸ್ಕೃತಿಗೆ ಹೊಂದಿಕೊಂಡೇ ಒಳ್ಳೆಯ ಮುಸಲ್ಮಾನನಾಗಬಹುದು ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡಿದ್ದರೂ ನಡೆದಿದೆ. ಆ ಪ್ರದೇಶದ ಸಾಮಾಜಿಕ ಪರಿಸರದಿಂದ ಅವರು ಬೇರೆಯಾಗುವ ಅವಶ್ಯಕತೆ ಇಲ್ಲ. ಆದರೆ ವಿದೇಶೀ ಜೋಡಣೆಯು ಅವರನ್ನು ಹಾಗೆ ಮಾಡುತ್ತದೆ. ಮತ್ತು ಒಳ್ಳೆಯ ಮುಸ್ಲಿಮನಾಗಬೇಕಾದರೆ ಅಲ್ಲಿನ ಸಾಮಾಜಿಕ ಪರಿಸರಕ್ಕಿಂತ ಹೆಚ್ಚಾದ ಅರಬತನ ಹೊಂದಿರಬೇಕೆಂದು ತಲೆಯಲ್ಲಿ ತುಂಬುತ್ತದೆ.

ಇದು (ಆತ್ಮಹೀನತಾಭಾವ ಮತ್ತು ಜನರ ಮೇಲೆ ಅದರ ಪರಿಣಾಮಗಳು) ಒಂದು ಗಂಭೀರ ವಿಷಯವಾಗಿದೆ ಮತ್ತು ಭಾರತೀಯ ಭವ್ಯ ನಿರೂಪಣೆಯನ್ನು ಒಡೆಯುವಂತಹದ್ದಾಗಿದೆ. ಭಾರತೀಯ ಭವ್ಯ ನಿರೂಪಣೆಯು ಮುಖ್ಯವಾಗಬೇಕು ಮತ್ತು ಇತರೆ ನಿರೂಪಣೆಗಳಿಗೆ ಅದರ ನಂತರದ ಗೌರವಯುತವಾದ ಜಾಗ ಮಾಡಿಕೊಡಬೇಕು. ಅಲ್ಪಸಂಖ್ಯಾತ ಮತಗಳಿಗೆ ಹೇಗೆ ಗೌರವಯುತವಾದ ಸ್ಥಾನ ದೊರಕಿಸಿಕೊಡಬೇಕೆಂದು ನನ್ನನ್ನು ಅನೇಕ ಬಾರಿ ಕೇಳಲಾಗುತ್ತದೆ. ನಾನು ಹೀಗೆ ಹೇಳುತ್ತೇನೆ.

ಭಾರತೀಯ ಭವ್ಯ ನಿರೂಪಣೆಯಲ್ಲಿ ಅಲ್ಪಸಂಖ್ಯಾತ ಮತಗಳ ಸ್ಥಾನದ ಬಗ್ಗೆ

ಅಲ್ಪಸಂಖ್ಯಾತ ಮತಗಳ ಮೂಲ ವಿದೇಶದಲ್ಲಿದೆ. ಅವುಗಳೇ ದೊಡ್ಡ ಸವಾಲಾಗಿವೆ. ಏಕೆಂದರೆ ಅವುಗಳ ಮೂಲ ಮತ್ತು ಕೊಂಡಿ ವಿದೇಶದಲ್ಲಿದೆ. ನಾವು ಈ ವಿಷಯದ ಬಗ್ಗೆ ಗಮನ ಹರಿಸಬೇಕು, ಇಲ್ಲವಾದರೆ ಈ ಸಮಸ್ಯೆಯ ಪರಿಹಾರ ಮಾಡಲಾಗದು. ವಿದೇಶೀ ಮೂಲದ ಮತಗಳನ್ನು ಅನುಸರಿಸುವ ಎಲ್ಲ ಭಾರತೀಯರು ಮೂರು ಆವಶ್ಯಕತೆಗಳನ್ನು ಪಾಲಿಸಬೇಕು. ಈ ಭಾರತೀಯರು ಎರಡನೆಯ ದರ್ಜೆಯ ಭಾರತೀಯರಲ್ಲ.

  1. ಅವರು ಪರಸ್ಪರ ಗೌರವದ ತತ್ತ್ವವನ್ನು ಅನುಸರಿಸಬೇಕು. ಪರಸ್ಪರ ಗೌರವವನ್ನು ‘ವಿಭಿನ್ನತೆ’ ಪುಸ್ತಕದಲ್ಲಿ ವ್ಯಾಖ್ಯಾನಿಸಲಾಗಿದೆ. ಪರಸ್ಪರ ಗೌರವ ಮತ್ತು ಸಹಿಷ್ಣುತೆ ಎರಡೂ ಒಂದೇ ಅಲ್ಲ. ಸಹಿಷ್ಣುತೆಯ ತತ್ತ್ವವನ್ನು ಪಶ್ಚಿಮದಲ್ಲಿ ಕಲಿಸಲಾಗುತ್ತದೆ. ಅದು ಗೌರವಕ್ಕಿಂತ ಕಡಿಮೆಯಾದುದು. ಪರಸ್ಪರ ಗೌರವವೆಂದರೆ, ಮತ್ತೊಬ್ಬರು ಹೇಗಾದರೂ ಇರಲಿ, ಅವರನ್ನು ಗೌರವಿಸುವುದು. ಮತ್ತೊಬ್ಬರ ಪೂಜಾವಿಧಾನವನ್ನು ಗೌರವಿಸುವುದು ಇತ್ಯಾದಿ. ಆದರೆ, ‘ಪರಸ್ಪರ’ ಎಂದು ಹೇಳಿದ್ದರಿಂದ ಆ ಗೌರವವು ಪಾರಸ್ಪರಿಕ. ಪರಸ್ಪರ ಗೌರವವಿದ್ದಾಗ, ಮತಾಂತರಕ್ಕಾಗಲೀ, ಸ್ಪರ್ಧೆಗಾಗಲೀ, ಮೇಲುಗೈ ನೀತಿಗಾಗಲೀ ಆಸ್ಪದವಿಲ್ಲ. ಪರಸ್ಪರ ಗೌರವದ ಈ ತತ್ವವನ್ನು ನಾನು ಮತೀಯ ಸಂವಾದಗಳಲ್ಲಿ ಉಪಸ್ಥಾಪನೆ ಮಾಡಿದಾಗ, ಅಬ್ರಹಾಮಿಕ್ ಮತಗಳನ್ನು ಅನುಸರಿಸುವವರ ಪ್ರತಿಕ್ರಯೆಯನ್ನು ನೋಡಲು ಮಜವಾಗಿರುತ್ತದೆ. ಅಬ್ರಹಾಮಿಕ್ ಮತಗಳನ್ನು ಪಾಲಿಸುವವರು ಪರಸ್ಪರ ಗೌರವದ ಈ ತತ್ತ್ವವನ್ನು ಅರಗಿಸಿಕೊಳ್ಳಲಾರರು. ಅವರು ತಮ್ಮ ಅಸಮಾಧಾನವನ್ನು ಹೊರಹಾಕಿದಾಗ ಅದನ್ನು ಖಂಡಿಸಬೇಕು.
  2. ಎರಡನೆಯ ಆವಶ್ಯಕತೆಯೆಂದರೆ, ಕ್ರೈಸ್ತ ಹಾಗೂ ಇಸ್ಲಾಂ ಮತದ ಅನುಯಾಯಿಗಳು ವಿದೇಶೀ ಮುಖ್ಯಾಲಯದ (ಪ್ರಧಾನ ಕಛೇರಿಯ) ಅಧಿಕಾರವನ್ನು ನಿರಾಕರಿಸಬೇಕು. ಚೈನಾ ಕೂಡ ಹೀಗೆಯೇ ಮಾಡಿದೆ. ಚೈನಾ ಜಗತ್ತಿನ ಅತಿ ದೊಡ್ಡ ಕ್ರೈಸ್ತ ಜನಸಂಖ್ಯೆಯನ್ನು ಹೊಂದಿದ್ದರೂ ಕೂಡ, ಬಿಷಪ್ ನೇಮಕಾತಿಯನ್ನು ವ್ಯಾಟಿಕನ್ ಮಾಡಲಾರದು. ಅವರ ನೇಮಕ ಸ್ಥಾನೀಯವಾದದ್ದು. ಪ್ರಧಾನ ಕಛೇರಿಯು ಏನು ಮಾಡಬೇಕು ? ಯಾರನ್ನು ನೇಮಕ ಮಾಡಬೇಕು ? ಯಾವ ಸಿದ್ಧಾಂತವನ್ನು ಪಾಲಿಸಬೇಕು ? ಎಂದೆಲ್ಲ ನಿರ್ಣಯಿಸುವಂತಿಲ್ಲ. ಸಿದ್ಧಾಂತವು ಯಾವುದೇ ಹೊರಗಿನ ಪ್ರದೇಶದಿಂದ ಬರುವಂತಿಲ್ಲವೆಂಬ ನಿಯಮವನ್ನು ಚೈನಾ ಹಾಕಿಕೊಂಡಿದೆ, ಏಕೆಂದರೆ ಅದು ಚೀನೀ ಚರ್ಚು. ಈ ನಿಯಮವು ಕೇವಲ ಭಾಷೆಗೆ ಸೀಮಿತವಾಗಿಲ್ಲ. ಭಾರತದಲ್ಲಿ ಚರ್ಚುಗಳು ಪ್ರಾದೇಶಿಕ ಭಾಷೆಯನ್ನು ಬಳಸುತ್ತವೆ. ಆದರೆ, ದೊಡ್ಡ ಹುದ್ದೆಗಳ   ಬಿಷಪ್-ಗಳ ನೇಮಕಾತಿಯನ್ನು ವ್ಯಾಟಿಕನ್ ಮಾಡುತ್ತದೆ. ಇದರಿಂದ ನಿಷ್ಠೆಯ ಪ್ರಶ್ನೆ ಏಳುತ್ತದೆ ಮತ್ತು ಆಸಕ್ತಿಗಳ ಸಂಘರ್ಷ ಎದುರಾಗುತ್ತದೆ. ಆದ್ದರಿಂದ, ಎರಡನೆಯ ಆವಶ್ಯಕತೆಯೆಂದರೆ, ಈ ಮತಗಳ ವಿದೇಶೀ ಪ್ರಧಾನ ಕಛೇರಿಯ ಅಧಿಕಾರವನ್ನು ಮೊಟಕುಗೊಳಿಸಬೇಕು ಮತ್ತು ಅವುಗಳ ಶೇಕಡಾ ನೂರರಷ್ಟು ಭಾರತೀಯವಾಗಬೇಕು ಹಾಗೂ ವಿದೇಶೀ ಪ್ರಾಧಿಕಾರಿಗಳ ಅಧಿಕಾರವನ್ನಾಗಲೀ, ವ್ಯಾಖ್ಯಾನವನ್ನಾಗಲೀ ಪರಿಗಣಿಸಬಾರದು. ಕುರಾನ್-ಗೂ ಇದೇ ಅನ್ವಯವಾಗಬೇಕು. ಕುರಾನ್-ನ ವ್ಯಾಖ್ಯಾನದ ಅಂತಿಮ ನಿರ್ಣಯವನ್ನು ಯಾವುದೋ ಬೇರೆ ದೇಶಕ್ಕೆ ಏಕೆ ಬಿಟ್ಟುಕೊಡಬೇಕು ? ಅದರ ವ್ಯಾಖ್ಯಾನಕ್ಕಾಗಿ  ನಾವು ನಮ್ಮದೇ ಆದ ವ್ಯವಸ್ಥೆಯನ್ನು ಹೊಂದಿರಬಾರದೇಕೆ ?
  3. ಮೂರನೆಯದಾಗಿ, ಕ್ರಿಶ್ಚಿಯನ್ ಮತ್ತು ಇಸ್ಲಾಂ ಮತವನ್ನು ಪಾಲಿಸುವ ಭಾರತೀಯರು, ಆ ಮತಗಳು ಭಾರತಕ್ಕೆ ಬಂದಾಗ ಆ ಮತವನ್ನು ಪಾಲಿಸುವವರು ಎಸಗಿದ ದೌರ್ಜನ್ಯ ಮತ್ತು ದಬ್ಬಾಳಿಕೆಯ ಇತಿಹಾಸವನ್ನು ಒಪ್ಪಿಕೊಳ್ಳಬೇಕು ಮತ್ತು ನಿರಾಕರಿಸಬಾರದು. ಇಂದಿನ ಮುಸಲ್ಮಾನರು ಔರಂಗಜೇಬನ ಕಾರ್ಯಗಳಿಗೆ ಜವಾಬ್ದಾರರಲ್ಲ. ಕೆಲವು ಕ್ರೈಸ್ತರು ನಡೆಸಿದ ರಕ್ತಸಿಕ್ತ ದಾಖಲೆಗಳಿಗೆ ಇಂದಿನ ಕ್ರೈಸ್ತರೂ ಜವಾಬ್ದಾರರಲ್ಲ. ಅವರು (ಭಾರತೀಯ ಕ್ರೈಸ್ತರು ಮತ್ತು ಮುಸ್ಲಿಮರು) ತಾವು ಮೊದಲು ಭಾರತೀಯರೆಂದೂ, ತಾವು ಭಾರತದ ಸಹೋದರ-ಸಹೋದರಿಯರೊಂದಿಗೆ ಇದ್ದೇವೆಂದೂ ಹೇಳಬೇಕು. ಕ್ರಿಶ್ಚಿಯಾನಿಟಿ ಅಥವಾ ಇಸ್ಲಾಂನ ಪ್ರಕಾರ ಅವರು ಕ್ರೈಸ್ತರು ಅಥವಾ ಮುಸ್ಲಿಮರು ಆಗಿರಬಹುದು. ಆದರೆ, ಅವರು ತಮ್ಮ ಮತಾವಲಂಬಿಗಳು ಹಿಂದೆ ನಡೆಸಿದ ಅಪರಾಧಗಳನ್ನು ಒಪ್ಪಲಾರರು.

ಈ ಮೂರು ತತ್ತ್ವಗಳ ಮುಖಾಂತರ, ನಾವು ಸುಸಂಯೋಜಿತ ಸಮಾಜವನ್ನು ನಿರ್ಮಿಸಬಹುದು. ಭಾರತೀಯ ನಿರೂಪಣೆಯ ಪ್ರಚಾರದ ಸಮಸ್ಯೆಗಳನ್ನು ನಾವು ಅರಿತರೆ, ಅದರ ಯೋಜನೆಗೆ ಸಹಾಯಕವಾದೀತು. ಈ ವ್ಯಾಯಾಮಕ್ಕಾಗಿ ದೊಡ್ಡ ರಾಯಭಾರಿಗಳ ಅಗತ್ಯವಿದೆ. ಈ ಕಡೆಗೆ, ಅಮೆರಿಕೆಯಲ್ಲಿ ನಾನು ಹಿಂದೂ ವಿದ್ಯಾರ್ಥಿ ಪರಿಷತ್ತಿನ 50 ವಿಭಾಗಗಳ ಜೊತೆಗೆ ಕೆಲಸ ಮಾಡುತ್ತಿದ್ದೇನೆ. ಈ ಕಲ್ಪನೆಯು ಒಳ್ಳೆಯ ವಿದ್ಯಾರ್ಥಿಗಳನ್ನು ರೂಪಿಸುವ ಕುರಿತಾಗಿದೆ. ಮತ್ತು ಅವರು ಯಾವುದನ್ನು ಪ್ರಸ್ತುತಪಡಿಸಬೇಕು, ಹೇಗೆ ಪ್ರಸ್ತುತಪಡಿಸಬೇಕು, ಹೇಗೆ ಪ್ರಸ್ತುತಪಡಿಸಬಾರದು ಎಂದೆಲ್ಲ ಹೇಳಿಕೊಡಲಾಗುತ್ತದೆ. ನಾನು ಅವರ ಅನೇಕ ಗಂಭೀರ ಪ್ರಶ್ನೆಗಳನ್ನು ಸ್ವೀಕರಿಸಿದ್ದೇನೆ. ತಮ್ಮ ಪೋಷಕರು ಮತ್ತು ಗುರುಗಳು ಏಕೆ ಪ್ರಶ್ನೆಗಳನ್ನು ಎದುರಿಸಲಾರದಾದರೋ, ಅವುಗಳಿಗೆ ಉತ್ತರ ಹುಡುಕಲಾಗಲಿಲ್ಲವೋ , ಎದುರಿಸಲು ಮುಜುಗರಕ್ಕೊಳಗಾದರೋ, ಅಂತಹವನ್ನೆಲ್ಲ ಸ್ವೀಕರಿಸಿದ್ದೇನೆ. ಅಂತಹ ಪ್ರಶ್ನೆಗಳನ್ನು ಯಾರು ಬೇಕಾದರೂ ಕೇಳಬಹುದು, ನಾನು ಉತ್ತರಿಸಲು ಸಿದ್ಧನಿದ್ದೇನೆ.

ಭಾರತೀಯ ನಿರೂಪಣೆ

ಈ ಭಾರತೀಯ ನಿರೂಪಣೆಯನ್ನು ರಾಜತಾಂತ್ರಿಕರಿಗೆ, ಸೇನೆಯಲ್ಲಿರುವವರಿಗೆ, ಕೈಗಾರಿಕೋದ್ಯಮಿಗಳಿಗೆ ನಾವು ಕಲಿಸಬೇಕು. ಕೈಗಾರಿಕೋದ್ಯಮಿಗಳಿಗೆ ಅದು ಬಹಳ ಸುಲಭ, ಏಕೆಂದರೆ ಯಾವುದೇ ಅಂತಾರಾಷ್ಟ್ರೀಯ ಸಮಾಲೊಚನೆಗಳು ನಡೆದಾಗ, ಅಮೆರಿಕಾ, ಚೈನಾ, ಜಪಾನ್, ಬ್ರಿಟಿಷ್, ಫ್ರೆಂಚ್ ಮುಂತಾದವರು ತಮ್ಮ ಸಂಸ್ಕೃತಿಯ ವೈಶಿಷ್ಟ್ಯವನ್ನು ಚೆನ್ನಾಗಿ ಬಲ್ಲರು. ಆದರೆ, ಭಾರತೀಯರಿಗೆ ಆ ಸ್ಪಷ್ಟತೆಯಿಲ್ಲ. ಅವರು ಭಾಂಗ್ರಾ, ಬಾಲಿವುಡ್, ಕ್ರಿಕೆಟ್ ಮತ್ತು ಇನ್ನಿತರೆ ವಿಷಯಗಳ ಬಗ್ಗೆ ಅರಿತಿರಬಹುದು. ಆದರೆ, ತಮ್ಮ ಸಂಸ್ಕೃತಿಯು ಏಕೆ ವಿಶಿಷ್ಟವಾಗಿದೆ ಎಂಬುದನ್ನು ಅವರು ಅರಿಯರು. ಅಂತಿಮಾಗಿ, ನಾನು ಎರಡು ಅಂಶಗಳನ್ನು ಸಂಕ್ಷೇಪವಾಗಿ ಹೇಳುತ್ತೇನೆ.

  1. ಭಾರತೀಯ ಸಂವಿಧಾನವು ಭಾರತೀಯ ಭವ್ಯ ನಿರೂಪಣೆಗೆ ಹೊಂದಿಕೊಂಡಂತಿಲ್ಲ. ಅದನ್ನು ಬದಲಾಯಿಸಲು ಸಂವಾದವನ್ನು ಯಾರಾದರೂ ಆರಂಭಿಸಬೇಕು. ಭಾರತೀಯ ನಿರೂಪಣೆಯ ಮೂಲಭೂತ ಚಿಂತನೆಗಳನ್ನು ಮತ್ತು ಅರ್ಥಶಾಸ್ತ್ರ, ಧರ್ಮಶಾಸ್ತ್ರಗಳ ತತ್ತ್ವಗಳನ್ನು ಆಧರಿಸಿ ಚರ್ಚೆಗಳನ್ನು, ಸಮ್ಮೇಳನಗಳನ್ನು ಏರ್ಪಡಿಸಬೇಕು.
  2. ಕೇವಲ ಭಾಷಣಗಳಿಂದ ಏನನ್ನೂ ಸಾಧಿಸಲಾರೆವು. ಅವುಗಳೊಂದಿಗೆ ಗಂಭೀರ ಸಂಶೋಧನೆಗಳೂ ಜೊತೆಯಾಗಬೇಕು. ಉತ್ತಮ ತಲಸ್ಪರ್ಶಿ ಸಂಶೋಧನೆಗೆ ಹೆಚ್ಚು ಒತ್ತು ನೀಡಬೇಕು. ಒಳ್ಳೆಯ ಸಂಶೋಧನೆಯನ್ನು ಆಧರಿಸಿ ಮಾಡದಿರುವ ಸಮ್ಮೇಳನಗಳು ಕೇವಲ ಕಲ್ಪನೆಗಳ ತದ್ರೂಪು ಮತ್ತು ಮರುಬಳಕೆಯಂತಾಗುತ್ತದೆ. ಈ ದಿಸೆಯಲ್ಲಿ ಗಭೀರ ಸಂಶೋಧನೆ ನಡೆಸಿರುವ ಮತ್ತು ಸಂಸ್ಕೃತ, ಆಂಗ್ಲಭಾಷಾಪಾಂಡಿತ್ಯ ಹೊಂದಿರುವ, ನವೀಕೃತ ಜ್ಞಾನವನ್ನು ಹೊಂದಿರುವ ಚರ್ಚಾಪಟುಗಳಾದ ಯುವ ವಿದ್ವಾಂಸರಿಗೆ ತರಬೇತಿ ನೀಡಬೇಕು. ಇದು ಮಂದಗಾಮಿ ಪ್ರಕ್ರಿಯೆ.

ವಿದ್ವಾಂಸರ ಸಂಖ್ಯಾ ಅಭಾವ

ನಮಗೆ ಹೆಚ್ಚು ಹಣ್ಣುಗಳು ಬೇಕಾದರೆ, ನಾವು ಹೆಚ್ಚು ಹಣ್ಣುಬಿಡುವ ಮರಗಳನ್ನು ನಡೆಬೇಕು. ಅವುಗಳು ಹಣ್ಣುಬಿಡಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತವೆ. ಜ್ಞಾನದ ಪೂರೈಕೆಯ ಪ್ರಮಾಣವನ್ನು ಹೆಚ್ಚಸಬೇಕು ಮತ್ತು ಸಮಯ ಹಾಗೂ ಹಣವನ್ನು ಖರ್ಚು ಮಾಡಬೇಕು. ಈ ಕಲ್ಪನೆಯು ಭಾರತೀಯ ನಿರೂಪಣೆಯನ್ನು ಎತ್ತಿಹಿಡಿಯುವ ಹೆಚ್ಚು ಹೆಚ್ಚು ವಿದ್ವಾಂಸರನ್ನು ಸೃಜಿಸಬೇಕೆಂಬುದಾಗಿದೆ. ಅದಕ್ಕಾಗಿ ಇದು ಸರಿಯಾದ ಸಮಯ.

Translation Credits: – Dr. Udayana Hedge.

Leave a Reply